ಒತ್ತಡ ಗುಂಪು: ಸರ್ಕಾರದ ಮೂಲಕವೇ ಬೇರಾವ ವಿಧಾನಗಳಿಂದಲೋ ರಾಜಕೀಯ ಬದಲಾವಣೆ ತರಲು ಯತ್ನಿಸುವ, ಆದರೆ ವಿಧಾನ ಮಂಡಲದಲ್ಲಿ ಒಂದು ರಾಜಕೀಯ ಪಕ್ಷವೆಂದು ಕರೆಯಿಸಿಕೊಳ್ಳುವಂಥ ರೀತಿಯಲ್ಲಿ ಪ್ರಾತಿನಿಧಿಕವಾಗಿಲ್ಲದ ಒಂದು ಗುಂಪು (ಪ್ರೆಷರ್ ಗ್ರೂಪ್). ರಾಜಕೀಯ ಬದಲಾವಣೆಗಳಿಗಾಗಿ ಒತ್ತಡ ಹೇರುವ ಪ್ರವೃತ್ತಿ ಸಾರ್ವಕಾಲಿಕ, ಸಾರ್ವತ್ರಿಕ. ಸಂಬಂಧಪಟ್ಟ ವ್ಯಕ್ತಿಗಳ ಅಥವಾ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ತಮ್ಮ ಗುರಿಯನ್ನು ಅಥವಾ ಅಭಿಲಾಷೆಯನ್ನು ಈಡೇರಿಸಿಕೊಳ್ಳುವುದು ಅಥವಾ ತಮ್ಮ ಹಿತ ರಕ್ಷಿಸಿಕೊಳ್ಳುವುದು ಒತ್ತಡ ಗುಂಪುಗಳ ವಿಧಾನ. ಆದರೂ ಇವು ರಾಜಕೀಯ ಪಕ್ಷಗಳಲ್ಲ. ಇವಕ್ಕೆ ಚುನಾಯಿತ ಪ್ರತಿನಿಧಿಗಳಿರುವುದಿಲ್ಲ. ಯಾವ ವ್ಯಕ್ತಿಯನ್ನೂ ತಮ್ಮ ಪ್ರತಿನಿಧಿಯೆಂದು ಇವು ಹೆಸರಿಸುವುದಿಲ್ಲ. ಯಾವ ಪತ್ರಿಕೆಗಳಲ್ಲೇ ಆಗಲಿ ಇವುಗಳ ಬಗ್ಗೆ ಜಾಹೀರಾತು ಇರುವುದಿಲ್ಲ. ಜೊತೆಗೆ ರಾಜಕೀಯ ಪಕ್ಷಗಳಲ್ಲಿರುವಂತೆ ಯಾವ ರೀತಿಯ ಒಡಂಬಡಿಕೆಯೇ ಆಗಲಿ ನೀತಿ ನಡೆವಳಿಕೆಗಳಾಗಲಿ ಇವಕ್ಕಿಲ್ಲ. ರಾಜಕೀಯ ಪಕ್ಷಗಳು ಜನರನ್ನು ಸಂಘಟಿಸಿ ಚಂದಾ ವಸೂಲು ಮಾಡಿ ಅವರನ್ನು ತಮ್ಮ ನಿಬಂಧನೆಗನುಸಾರವಾಗಿ ನಡೆಯುವಂತೆ ಒತ್ತಾಯಮಾಡುತ್ತವೆ. ಆದರೆ ಒತ್ತಡದ ಗುಂಪಿನಲ್ಲಿ ಇದು ಯಾವುದೂ ಇಲ್ಲ. ಇದು ಸದಸ್ಯರಿಲ್ಲದ ಗುಂಪು. ರಾಜಕೀಯ ಪಕ್ಷಕ್ಕಾದರೋ ತನ್ನದೇ ಆದ ಕಾರ್ಯಕ್ರಮವೊದುಂಟು; ಅದನ್ನು ನಿರ್ದೇಶಿಸುವ ತತ್ವ್ತವುಂಟು. ಒತ್ತಡದ ಗುಂಪುಗಳು ಎರಡು ತೆರ: 1 ಹಿತ ಗುಂಪು (ಇಂಟರೆಸ್ಟ್‌ ಗ್ರೂಪ್)-ಒಂದು ಪಂಗಡದ ಜನಕ್ಕೆ ಸಾಮಾನ್ಯವಾಗಿರುವ ಹಿತಗಳ ರಕ್ಷಣೆಗಾಗಿ ರಚಿತವಾದದ್ದು. 2 ಮನೋಭಾವ ಗುಂಪು (ಆಟಿಟ್ಯೂಡ್ ಗ್ರೂಪ್)-ಖಚಿತವಾಗಿ ನಿರ್ದೇಶಿಸಲಾದ ಯಾವುದೋ ಒಂದು ಉದ್ದೇಶ ಅಥವಾ ಧ್ಯೇಯ ಸಾಧನೆಗಾಗಿ ರಚಿತವಾದದ್ದು. ಇದರ ಸದಸ್ಯರಿಗೆಲ್ಲ ಸಾಮಾನ್ಯವಾದ ಹಿತಗಳಿರಬೇಕೆಂಬ ನಿಯಮವಿಲ್ಲ. ಅವರಿಗೆ ಸಮಾನವಾದ ಮನೋಭಾವ ಅಥವಾ ಗುರಿಗಳಿರಬೇಕು.

ಒಂದೇ ಬಗೆಯ ಹಿತಗಳನ್ನು ಹೊಂದಿರುವವರು ಯಾರೆಂಬುದನ್ನು ನಿರ್ಣಯಿಸುವುದು ಹಲವು ವೇಳೆ ಸುಲಭ ಸಾಧ್ಯ. ಉದಾಹರಣೆಗೆ, ಮೋಟಾರು ವಾಹನಗಳ ಮಾಲೀಕರೆಲ್ಲ ಒಂದೇ ಬಗೆಯ ಹಿತಗಳನ್ನು ಹೊಂದಿದವರೆನ್ನಬಹುದು. ಆದರೆ ಒಂದೇ ಬಗೆಯ ಮನೋಭಾವ ಅಥವಾ ಗುರಿ ಹೊಂದಿದವರು ಯಾರೆಂಬುದನ್ನು ನಿರ್ಧರಿಸುವುದು ಕಷ್ಟ. ಇದು ಮಾನಸಿಕ. ಹಿತಗುಂಪು ಸಾಮಾನ್ಯವಾಗಿ ಶಾಶ್ವತ. ಆ ಹಿತಗಳನ್ನುಳ್ಳ ಪಂಗಡ ಇರುವವರೆಗೂ ಹಿತಗುಂಪು ಉಳಿಯುತ್ತದೆ. ಆದರೆ ಮನೋಭಾವ ಗುಂಪು ಅಷ್ಟು ಸ್ಥಿರವಲ್ಲ. ಧ್ಯೇಯ ಅಥವಾ ಉದ್ದೇಶ ಪುರೈಸುವವರೆಗೂ ಅದು ಮುಂದುವರಿಯಬಹುದು.

ಇಂದಿನ ಪ್ರಜಾಪ್ರಭುತ್ವಗಳಲ್ಲಿ ಸಂಘಗಳಿಗೆ ಅಥವಾ ಕೂಟಗಳಿಗೆ ಪ್ರಬಲವಾದ ಸಾಧನಗಳಿವೆ. ಒಂದೇ ಭಾವನೆಯುಳ್ಳ ಒಂದೇ ಬಗೆಯ ಹಿತಾಸಕ್ತಿಯುಳ್ಳ ಜನರನ್ನು ಒಂದೂಗೂಡಿಸುವಂಥ ಪ್ರಚಾರ ಮತ್ತು ಸಂಪರ್ಕಸಾಧನಗಳೂ ಸಂಚಾರ ಸೌಲಭ್ಯಗಳೂ ಉಂಟು. ಈ ಗುಂಪುಗಳು ರಾಜ್ಯಮಟ್ಟದಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟಗಳನ್ನೇ ಮುಟ್ಟಬಹುದು. ಒತ್ತಡ ಗುಂಪುಗಳ ಪ್ರಭಾವ, ಅವುಗಳಲ್ಲಿರುವ ವ್ಯಕ್ತಿಗಳ ಮತ್ತು ಅವು ಸಾಧಿಸಬೇಕೆಂದಿರುವ ಗುರಿಯನ್ನೇ ಅವಲಂಬಿಸಿರುತ್ತದೆ. ಅದು ಜನರನ್ನು ಒಲಿಸಿಕೊಂಡು, ಸರ್ಕಾರ ಅದರ ಒತ್ತಡಕ್ಕೆ ಮಣಿಯುವಂತೆ ಮಾಡಿ ತನ್ನ ಗುರಿಯನ್ನು ಸಾಧಿಸಿಕೊಳ್ಳುತ್ತದೆ. ಗುಂಪಿನ ಗುರಿ ಸಾಧನೆಗಾಗಿ, ಜನರ ಮನ ಒಲಿಸಿಕೊಳ್ಳಲು ಬಾನುಲಿ, ಪತ್ರಿಕೆಗಳು, ಟೆಲಿವಿಷನ್ ಮತ್ತು ಜನಸಂಪರ್ಕ ಸಾಧನಗಳನ್ನು ಬಳಸಿಕೊಳ್ಳುವುದುಂಟು.

ಭಿನ್ನ ಹಿತ, ಭಿನ್ನ ರುಚಿ, ಭಿನ್ನ ದೃಷ್ಟಿ ಇರುವ ಜನಗಳನ್ನು ಹೊಂದಿರುವುದು ಈಗಿನ ಸಮಾಜದ ಲಕ್ಷಣ. ಅಭಿಪ್ರಾಯ ಸ್ವಾತಂತ್ರ್ಯವಿರುವ ರಾಜಕೀಯ ವ್ಯವಸ್ಥೆಗಳಿರಲಿ, ಇದಕ್ಕೆ ಮನ್ನಣೆ ನೀಡದ ಸರ್ವಾಧಿಕಾರಿ ಪ್ರಭುತ್ವಗಳಲ್ಲೂ ಒತ್ತಡದ ಗುಂಪುಗಳು ರಹಸ್ಯವಾಗಿಯಾದರೂ ಕೆಲಸ ಮಾಡುತ್ತಿರುತ್ತವೆ. ಇವು ರಾಜಕೀಯ ಮುಖಂಡರ ಮೇಲೆ, ಸರ್ಕಾರದ ಮತ್ತು ಸರ್ಕಾರಿ ಅಧಿಕಾರಿಗಳ ಮೇಲೆ, ಚುನಾಯಿತ ಪ್ರತಿನಿಧಿಗಳ ಮೇಲೆ ತಮ್ಮ ಹಿಡಿತ ಇಟ್ಟುಕೊಳ್ಳುತ್ತವೆ.

ಒಂದು ಪ್ರಜಾಪ್ರಭುತ್ವದಲ್ಲಿ ನಾನಾ ಕ್ಷೇತ್ರಗಳಿಂದ ಆಯ್ಕೆ ಹೊಂದಿದ ಶಾಸಕರು ದೇಶದ ಎಲ್ಲ ಪ್ರಜೆಗಳನ್ನೂ ಪ್ರತಿನಿಧಿಸಲಾರರು. ಎಲ್ಲರ ಬೇಕು ಬೇಡಗಳಿಗೆ ಗಮನವೀಯಲಾರರು. ಅವರ ದೃಷ್ಟಿ ಅನೇಕ ವೇಳೆ ತಂತಮ್ಮ ಚುನಾವಣಾಕ್ಷೇತ್ರಗಳಿಗೇ ಸೀಮಿತವಾಗಿರುತ್ತದೆ; ಅಲ್ಲದೆ ತಮ್ಮ ಪಕ್ಷದ ರೀತಿ ನೀತಿಗಳ ಚೌಕಟ್ಟಿಗೆ ಬದ್ದವಾಗಿರುತ್ತದೆ.

ಆಗ ಒತ್ತಡ ಗುಂಪು ಜನರ ಬೇಕು ಬೇಡಗಳ ಬಗ್ಗೆ ಸರ್ಕಾರದ ಮತ್ತು ಶಾಸಕರ ಗಮನ ಸೆಳೆದು ಅವರ ಕಲ್ಯಾಣದ ಕಡೆಗೆ ಗಮನವೀಯುವಂತೆ ಒತ್ತಡ ಹಾಕುತ್ತದೆ. ಇದರ ಒತ್ತಡಕ್ಕೆ ಅನೇಕ ವೇಳೆ ಸರ್ಕಾರ ಮಣಿಯ ಬೇಕಾಗುವುದು. ಇದು ಕಾರ್ಮಿಕರ ಮತ್ತು ಉದ್ಯೋಗಸ್ಥರ ಪ್ರತಿನಿಧಿಯಂತೆ ವರ್ತಿಸಿ ಅವರ ಕ್ಷೇಮ ಸಾಧಿಸಬಹುದು. ಶಾಸನಸಭೆಯ ಅಧಿವೇಶನಗಳ ಅದರ ಸಮಿತಿ-ಉಪಸಮಿತಿಗಳ ಕಲಾಪಗಳಿಗೆ ಇದು ಸಾಮಗ್ರಿ ಒದಗಿಸಿ, ಸದಸ್ಯರಿಗೆ ಸಾಕಷ್ಟು ಕೆಲಸ ಕೊಟ್ಟು, ಸರ್ಕಾರ ಮತ್ತು ಜನತೆಯ ನಡುವೆ ಸಂಪರ್ಕವನ್ನುಂಟುಮಾಡುತ್ತದೆ. ಒಂದು ಚುನಾವಣೆಯಿಂದ ಇನ್ನೊಂದು ಚುನಾವಣೆಯವರೆಗಿನ ಕಾಲದಲ್ಲಿ ಒತ್ತಡ ಗುಂಪು ಜನರಲ್ಲಿ ಜಾಗೃತಿಯನ್ನುಂಟು ಮಾಡಿ, ಕೆಲವು ವಾಸ್ತವಿಕ ಸಮಸ್ಯೆಗಳತ್ತ ಸರ್ಕಾರದ ಗಮನ ಸೆಳೆಯುವ ಒಂದು ಸಾಧನವಾಗಿದೆ.

ಒಬ್ಬ ಪ್ರಭಾವಿತ ವ್ಯಕ್ತಿ ಕೆಲವು ವೇಳೆ ಹಣ ಮತ್ತು ಜನಬಲವನ್ನು ದುರುಪಯೋಗಪಡಿಸಿಕೊಂಡು ಒತ್ತಡ ಗುಂಪಿನ ಪ್ರಭಾವವನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳಲೂಬಹುದು. ಒಂದು ಗುಂಪಿಗೆ ಬೇಕು ಮತ್ತೊಂದು ಗುಂಪಿಗೆ ಬೇಡವಾದಾಗ ಈ ಎರಡು ಗುಂಪುಗಳ ನಡುವೆ ಘರ್ಷಣೆಗೆ ಅವಕಾಶವಿದೆ. ಅಲ್ಪಸಂಖ್ಯಾತರ ಹಿತ ಅಥವಾ ಗುರಿ ಸಾಧನೆಯಲ್ಲಿ ನಿರತವಾದ ಒತ್ತಡ ಗುಂಪು ಅನೇಕ ವೇಳೆ ಬಹುಜನರ ಕಲ್ಯಾಣಕ್ಕೆ ಧಕ್ಕೆ ತರಬಹುದು. ಇಂಥ ಒತ್ತಡ ಗುಂಪುಗಳು ರಾಜ್ಯವ್ಯವಸ್ಥೆಗಾಗಲಿ ಸಮಾಜ ವ್ಯವಸ್ಥೆಗಾಗಲಿ ಹಿತಕರವಲ್ಲ. ಮಾನವ ಶರೀರದಲ್ಲಿನ ರಕ್ತದ ಒತ್ತಡ ಯಾವುದೋ ಒಂದು ಮಟ್ಟವನ್ನು ಮೀರಿದಾಗ ದೇಹಕ್ಕೆ ಅಪಾಯ ಸಂಭವಿಸುವಂತೆ ಒತ್ತಡ ಗುಂಪುಗಳಿಂದಲೂ ದೇಶಕ್ಕೆ ಅಪಾಯ ಸಂಭವಿಸಬಹುದು. ಒಂದು ರಾಷ್ಟ್ರದ ಆಡಳಿತ ವ್ಯವಸ್ಥೆ ತುಂಬ ದುರ್ಬಲವಾಗಿದ್ದು ನಾನಾಬಗೆಯ ಒತ್ತಡಗಳಿಗೆ ಮಣಿಯುವಂತಿರುವುದು ಒಳ್ಳೆಯದಲ್ಲ. ಉಷ್ಣತೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಡಿಮೆ ಒತ್ತಡವಿರುವ ಕೇಂದ್ರದೆಡೆಗೆ ಎಲ್ಲ ಕಡೆಗಳಿಂದಲೂ ನುಗ್ಗಿದ ಗಾಳಿಯಿಂದ ಅನಾಹುತವಾಗುವಂತೆ ರಾಜಕೀಯ ಕ್ಷೇತ್ರದಲ್ಲೂ ಆಗುವುದು ಸಾಧ್ಯ. ಆದರೆ ಹೆಚ್ಚು ಒತ್ತಡಕ್ಕೆ ಮಣಿಯದ, ಆದರೆ ಅದರ ಪ್ರಭಾವಕ್ಕೆ ಒಳಗಾಗಿಯೂ ಇರುವ ವ್ಯವಸ್ಥೆಯೇ ಸುವ್ಯವಸ್ಥೆ. ಇಂಥ ವ್ಯವಸ್ಥೆಯಲ್ಲಿರುವ ನಾನಾ ಹಿತಗಳ, ಉದ್ದೇಶಗಳ ಮತ್ತು ಗುರಿಗಳ ಒತ್ತಡ ಗುಂಪುಗಳ ಪರಸ್ಪರ ಕ್ರಿಯೆ-ಪ್ರತಿಕ್ರಿಯೆಗಳ ಫಲವಾಗಿ ಒಂದು ಬಗೆಯ ಸಮತೋಲ ಏರ್ಪಡುವುದು ಸಾಧ್ಯ. ಆಗ ಈ ಗುಂಪುಗಳಿಂದ ಸಾರ್ವತ್ರಿಕ ಹಿತ ಸಾಧಿಸುತ್ತದೆ. ಈ ಬಗೆಯ ವೈಜ್ಞಾನಿಕ ಬೆಳೆವಣಿಗೆಗಳು ಹೆಚ್ಚು ಪ್ರಾಮುಖ್ಯಗಳಿಸುತ್ತವೆ. ಬ್ರಿಟನ್, ಅಮೆರಿಕ, ಫ್ರಾನ್ಸ್‌ಗಳಲ್ಲಿ ಒತ್ತಡ ಗುಂಪುಗಳು ಬಹು ಶಕ್ತಿಯುತವಾಗಿ ಕೆಲಸ ಮಾಡುತ್ತಿವೆ. ಭಾರತ, ಜಪಾನ್ ಮತ್ತು ಮಧ್ಯ ಐರೋಪ್ಯ ರಾಜ್ಯಗಳಲ್ಲಿ ಇವು ಈಚೆಗೆ ಹೆಚ್ಚು ಪ್ರಭಾವ ಬೀರಲಾರಂಭಿಸಿವೆ.	(ಬಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ